Urdu   /   English   /   Nawayathi

ರಸ್ತೆ ಅಪಘಾತಕ್ಕೆ ಇಬ್ಬರು ಬಲಿ

share with us

ಉಪ್ಪಿನಂಗಡಿ: 10 ಫೆಬ್ರುವರಿ 2020 (ಫಿಕ್ರೋಖಬರ್ ಸುದ್ದಿ) ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ರಾ.ಹೆ.75ರಲ್ಲಿ ಭಾನುವಾರ ಮುಂಜಾನೆ ಕಾರೊಂದು ಟ್ಯಾಂಕರ್‌ಗೆ ಮುಖಾಮುಖಿ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, ಬಾಲಕನೋರ್ವ ಗಂಭೀರ ಗಾಯಗೊಂಡಿದ್ದಾನೆ. ಘಟನೆಯಲ್ಲಿ ನೆಲ್ಯಾಡಿಯ ಶಾಜಿ ವರ್ಗೀಸ್ ಅವರ ಪತ್ನಿ ಡಾ.ಜೈನಿ ಶಾಜಿ (43) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಜಿತಿನ್ ಜೇಕಬ್(27) ಮೃತಪಟ್ಟಿದ್ದಾರೆ. ಡಾ.ಜೈನಿ ಶಾಜಿ ಅವರ ಪುತ್ರ ಶರ್ವಿನ್ ಶಾಜಿ(15) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಾ.ಜೈನಿ ಶಾಜಿ ಉಜಿರೆಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರು. ಜಿತಿನ್ ಜೇಕಬ್ ಅವರು ನೆಲ್ಯಾಡಿಯ ಬೆಥನಿ ಆಶ್ರಮದಲ್ಲಿದ್ದುಕೊಂಡು ಧರ್ಮಗುರು ಶಿಕ್ಷಣದ ತರಬೇತಿ ಪಡೆಯುತ್ತಿದ್ದರು. ಇದರೊಂದಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನದ ವೈದ್ಯ ಶಿಕ್ಷಣಾರ್ಥಿಯಾಗಿದ್ದರು. ಮಂಗಳೂರಿನ ಅಡ್ಯಾರಿನಲ್ಲಿ ಆಯೋಜಿಸಲಾಗಿದ್ದ ಶಿಬಿರವೊಂದರಲ್ಲಿ ಭಾಗವಹಿಸಲು ಡಾ.ಜೈನಿ ಶಾಜಿ ಅವರು ಪುತ್ರ ಶರ್ವಿನ್ ಶಾಜಿ ಸೇರಿದಂತೆ ಮೂವರು ಬೆಳಗ್ಗೆ ಮನೆಯಿಂದ ಕಾರಿನಲ್ಲಿ ಹೊರಟಿದ್ದು, ಜಿತಿನ್ ಜೇಕಬ್ ಕಾರು ಚಾಲನೆ ಮಾಡುತ್ತಿದ್ದರು. ಮಂಗಳೂರಿನಿಂದ ನೆಲ್ಯಾಡಿ ಕಡೆ ಬರುತ್ತಿದ್ದ ಟ್ಯಾಂಕರ್‌ಗೆ ಬೆದ್ರೋಡಿ ಎಂಬಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ರಸ್ತೆಯಿಂದ 20 ಮೀಟರ್‌ಗಳಷ್ಟು ದೂರ ಚಲಿಸಿ, ರಸ್ತೆ ಬದಿ ವಿದ್ಯುತ್ ಕಂಬಕ್ಕೆ ತಾಗಿ ನಿಂತಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಟೇರಿಂಗ್ ತುಂಡಾಗಿ ಹೊರಗೆಸೆಯಲ್ಪಟ್ಟಿತ್ತು. ಡಾ.ಜೈನಿ ಶಾಜಿ ಅವರು ಪತಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಟ್ಯಾಂಕರ್ ಚಾಲಕ ಮುಹಮ್ಮದ್ ಶರೀಫ್ ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಹೊರತೆಗೆಯಲು ಹರ ಸಾಹಸ
ಘಟನೆಯಿಂದ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದ್ದು, ಎಸೆಯಲ್ಪಟ್ಟ ಕಾರು ನಜ್ಜು ಗುಜ್ಜ್ಜಾಗಿದ್ದರಿಂದ ಗಾಯಾಳುಗಳನ್ನು ಕಾರಿನಿಂದ ಹೊರಗೆಳೆಯಲು ಹರ ಸಾಹಸ ಪಡಬೇಕಾಯಿತು. ಸ್ಥಳೀಯರಾದ ನಝೀರ್ ಬೆದ್ರೋಡಿ, ಜಯಂತ ಬೆದ್ರೋಡಿ, ಮೋಹನ್, ಶಖೀಲ್ ಕೋಲ್ಪೆ, ಪದ್ಮಯ್ಯ, ಮೋನಪ್ಪ, ನವಾಜ್, ಫಾರೂಕ್, ಹರೀಶ, ರಾಘವ, ಸುರೇಶ, ದಿನೇಶ, ಶೇಖರ, ಫಾರೂಕ್, ಊವೆದ್, ಮಹಮ್ಮದ್ ಎಂಬುವರು ಸ್ಥಳೀಯ ಪೊಲೀಸರೊಡಗೂಡಿ ಗಾಯಾಳುಗಳನ್ನು ಕಾರಿನಿಂದ ಹೊರತೆಗೆದರು. ಕಾರಿನಲ್ಲಿ ಸಿಲುಕಿದ್ದ ಡಾ.ಜೈನಿ ಶಾಜಿ ಅವರನ್ನು ಹೊರಗೆಳೆಯಲು ರಶ್ಮಿತಾ ಹಾಗೂ ಲತಾ ಎಂಬಿಬ್ಬರು ಸಹಕರಿಸಿದರು.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا