Urdu   /   English   /   Nawayathi

‘ನ್ಯಾಯಾಧೀಶರು ಹೇಗೆಲ್ಲ ತೀರ್ಪು ಕೊಡುತ್ತಾರೆ ನಮಗೂ ಗೊತ್ತು’ ಎಂದಿದ್ದರು ಸುಬ್ಬಯ್ಯ

share with us

ಬೆಂಗಳೂರು: 27 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಎ.ಕೆ.ಸುಬ್ಬಯ್ಯ ನೇರ ನಡೆನುಡಿ ಹೊಂದಿದ್ದಂತಹ ವ್ಯಕ್ತಿ. ಈ ಕಾರಣಕ್ಕಾಗಿಯೇ ಹಲವರ ವಿರೋಧ ಕಟ್ಟಿಕೊಂಡಿದ್ದರು. ಬಿಜೆಪಿ ಪಕ್ಷದಲ್ಲಿಯೇ ಇದ್ದಿದ್ದರೆ ಇಷ್ಟೊತ್ತಿಗೆ ಕೇಂದ್ರದಲ್ಲಿ ಮಂತ್ರಿಯಾಗಿರುತ್ತಿದ್ದರು. ಯಾವುದೇ ವಿಚಾರವಿರಲಿ ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಿದ್ದರು. ವಕೀಲ ಹಾಗೂ ರಾಜಕಾರಣಿಯಾಗಿದ್ದ ಸುಬ್ಬಯ್ಯ ಅವರು ಎರಡೂ ಕ್ಷೇತ್ರದಲ್ಲಿಯೂ ನೇರ ನಡೆ ನುಡಿಗೆ ಹೆಸರುವಾಸಿ. ರಾಜಕೀಯವಿರಲಿ, ನ್ಯಾಯಾಲಯವಿರಲಿ ಒಂಟಿಸಲಗದಂತೆ ಹೋರಾಟ ನಡೆಸುತ್ತಿದ್ದರು.ಅವರು ವಕೀಲರಾಗಿದ್ದಾಗ ನಡೆದ ಘಟನೆ ಇದು. ಸುಬ್ಬಯ್ಯ ಅವರು ವಾದ ಮಂಡಿಸುತ್ತಿದ್ದಾಗ ನ್ಯಾಯಮೂರ್ತಿ ಚಂದ್ರಕಾಂತ್‌‌ ರಾಜ ಅರಸು ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಸುಬ್ಬಯ್ಯ ಅವರು ಪೀಠದ ಮುಂದೆ ವಾದ ಮಂಡಿಸುತ್ತಿದ್ದ ಸಮಯದಲ್ಲಿ ನ್ಯಾಯಾಧೀಶರು ಒಂದು ಮಾತು ಹೇಳಿದರು. ರಾಜಕಾರಣಿಗಳು ಹೇಗೆಲ್ಲಾ ಇರುತ್ತಾರೆ ಎಂದು ನಮಗೆ ಗೊತ್ತು. ಹಣ ತೆಗೆದುಕೊಂಡು ಏನೆಲ್ಲಾ ಮಾಡುತ್ತಾರೆ. ಅವರ ನಡತೆ ಸರಿ ಇಲ್ಲ ಎಂದರು. ಇದಕ್ಕೆ ತಕ್ಷಣವೇ ನ್ಯಾಯಾಲಯದಲ್ಲಿಯೇ ಪ್ರತಿಕ್ರಿಯೆ ನೀಡಿದ ಎ.ಕೆ.ಸುಬ್ಬಯ್ಯ ಅವರು, ನ್ಯಾಯಾಧೀಶರು ಏನೆಂದು ನಮಗೂ ಗೊತ್ತು, ಹಣ ಪಡೆದು ಏನೆಲ್ಲಾ ತೀರ್ಪು ಕೊಡುತ್ತಾರೆ, ಅವರ ನಡತೆಯೂ ಸರಿ ಇಲ್ಲ ಎಂದು ಬಿಟ್ಟರು.

ಎ.ಕೆ.ಸುಬ್ಬಯ್ಯ (ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.)

ಕೂಡಲೆ ನ್ಯಾಯಮೂರ್ತಿ ಚಂದ್ರಕಾಂತ್ ರಾಜು ಅರಸು ಕೋಪಗೊಂಡು ಎ.ಕೆ.ಸುಬ್ಬಯ್ಯ ಅವರ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಿದರು. ಕೂಡಲೆ ಎ.ಕೆ.ಸುಬ್ಬಯ್ಯ ಅವರೂ ಕೂಡ ನ್ಯಾಯಮೂರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದರು. ಈ ಎರಡೂ ಪ್ರಕರಣಗಳು ಅಂದಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾದವು. ಬಳಿಕ ನ್ಯಾಯಾಲಯದಲ್ಲಿ ಈ ಪ್ರಕರಣಗಳ ವಿಚಾರಣೆ ಆರಂಭಿಸುವ ಸಮಯ ಬಂತು. ಆದರೆ, ಯಾವ ನ್ಯಾಯಾಧೀಶರೂ ಈ ಇಬ್ಬರ ಪ್ರಕರಣಗಳ ವಿಚಾರಣೆಗೆ ಒಪ್ಪಲಿಲ್ಲ. ನ್ಯಾಯಾಧೀಶರೊಬ್ಬರ ವಿರುದ್ದ ದಾಖಲಾದ ಪ್ರಕರಣದ ವಿಚಾರಣೆ ನಡೆಸಲು ಯಾವ ನ್ಯಾಯಾಧೀಶರೂ ಮುಂದೆ ಬರಲಿಲ್ಲ. ಇದರಿಂದಾಗಿ ಈ ಇಬ್ಬರ ಪ್ರಕರಣಗಳನ್ನ ಕೈಬಿಡಲಾಯಿತು. ಇದು ಸುಬ್ಬಯ್ಯ ಅವರ ನೇರ ನಡೆನುಡಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ನನಗೆ ನೆನಪಿರುವ ಮತ್ತೊಂದು ಪ್ರಕರಣ ಎಂದರೆ, ಎ.ಕೆ.ಸುಬ್ಬಯ್ಯ ವಿಧಾನಪರಿಷತ್ ಸದಸ್ಯರಾಗಿದ್ದಾಗ ಸಿನಿಮಾ ನಟರ ವಿರುದ್ಧ ಹೇಳಿಕೆ ನೀಡಿದರು. ಇದು ನಟರ ಅಭಿಮಾನಿಗಳನ್ನು ಕೆರಳಿಸಿತು. ಕೂಡಲೆ ಜಯಮಹಲ್‌ನಲ್ಲಿ ಇದ್ದ ಅವರ ನಿವಾಸಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕಿ ಕಲ್ಲುತೂರಿದರು. ಆಗಲೂ ಅವರು ಹೆದರಲಿಲ್ಲ. ಕೊಡಗು ಜಿಲ್ಲೆಗೆ ಯಾವಾಗ ಅನ್ಯಾಯವಾದರೂ ಸುಬ್ಬಯ್ಯ ವಿಧಾನಪರಿಷತ್‌ನಲ್ಲಿ ಧ್ವನಿ ಎತ್ತಿದ್ದಾರೆ. ವಕೀಲರಾಗಿದ್ದಾಗ ಯಾವುದೇ ವ್ಯಕ್ತಿ ಏನೇ ಬೆದರಿಕೆ ಕೊಟ್ಟರೂ ತಮ್ಮ ನ್ಯಾಯಪರ ಹೋರಾಟದಿಂದ ಹಿಂದೆ ಸರಿಯುತ್ತಿರಲಿಲ್ಲ ಎಂದು ಎಂ.ಟಿ.ನಾಣಯ್ಯ ನೆನಪಿಸಿಕೊಂಡರು. 

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا