Urdu   /   English   /   Nawayathi

ಚಾರ್ಮಾಡಿ ಘಾಟ್ 2 ದಿನ ಸಂಚಾರ ನಿಷೇಧ

share with us

ಮಂಗಳೂರು: 08 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕರಾವಳಿ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಪರಿಣಾಮ ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ, ಆ ಮಾರ್ಗದಲ್ಲಿ ಎರಡು ದಿನ ವಾಹನ ಸಂಚಾರ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ. ಮಂಗಳೂರು-ವಿಲ್ಲುಪುರಂ ಹೆದ್ದಾರಿ 73ರ ಕಿ.ಮೀ 76ರಿಂದ 86.20ರವರೆಗೆ ಚಾರ್ಮಾಡಿ ಘಾಟ್ ಭಾಗದಲ್ಲಿ ಕಳೆದೆರಡು ದಿನಗಳಿಂದ ಆಗುತ್ತಿರುವ ಅಧಿಕ ಪ್ರಮಾಣದ ಗಾಳಿ ಮಳೆಯಿಂದಾಗಿ ಭಾರಿ ಗಾತ್ರದ ಮರಗಳೊಂದಿಗೆ ಗುಡ್ಡ ಕುಸಿತ ಉಂಟಾಗಿದೆ. ಗುಡ್ಡ ಕುಸಿತ ಜಾಗದಲ್ಲಿ ಪದೇಪದೆ ವಾಹನ ದಟ್ಟಣೆ ಉಂಟಾಗಿ ಕುಸಿತದ ಮಣ್ಣು ತೆರವು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎರಡು ದಿನ ವಾಹನ ಸಂಚಾರ ನಿಷೇಧಿಸುವಂತೆ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ವಿನಂತಿಸಿದ್ದರು. ಆ.7ರಂದು ಬೆಳಗ್ಗೆ 6ರಿಂದ 8ರಂದು ಮಧ್ಯರಾತ್ರಿ 12ರ ವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ.

ಬದಲಿ ಮಾರ್ಗ: ವಾಹನಗಳು ಉಜಿರೆ-ಧರ್ಮಸ್ಥಳ-ಕೊಕ್ಕಡ-ಗುಂಡ್ಯ-ಶಿರಾಡಿ(ಎನ್‌ಎಚ್ 75) ಹಾಗೂ ಮೂಡಿಗೆರೆ ಹ್ಯಾಂಡ್‌ಪೋಸ್ಟ್-ಜನ್ನಾಪುರ-ಆನೆಮಹಲ್-ಶಿರಾಡಿ-ಗುಂಡ್ಯ(ಎನ್‌ಎಚ್ 75) ಮೂಲಕ ಸಂಚರಿಸಬಹುದು.

ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತ
ಬೆಳ್ತಂಗಡಿ: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿದ್ದು, ಹಲವೆಡೆ ಮರಗಳು ಉರುಳಿ ಬಿದ್ದಿದೆ. ಮಂಗಳವಾರ ರಾತ್ರಿ ಘಾಟಿಯಲ್ಲಿ ಭಾರಿ ಭೂಕುಸಿತವಾಗಿದ್ದು ಘಾಟಿಯಲ್ಲಿ ವಾಹನಗಳು ಸಿಲುಕಿಕೊಂಡಿದ್ದವು. ಘಟನೆ ಮಾಹಿತಿ ತಿಳಿದು ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಮಂಗಳವಾರ ತಡ ರಾತ್ರಿ ಚಾರ್ಮಾಡಿಗೆ ಧಾವಿಸಿದ್ದರು. ಬೆಳ್ತಂಗಡಿ, ಧರ್ಮಸ್ಧಳ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಘಾಟಿಯಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು. ಮುಂಜಾನೆ ಮೂರು ಗಂಟೆವರೆಗೆ ನಡೆದ ಕಾರ‌್ಯಾಚರಣೆಯಲ್ಲಿ ಸಿಲುಕಿಕೊಂಡಿದ್ದ ವಾಹನಗಳನ್ನು ತೆರವು ಗೊಳಿಸಲಾಯಿತು. ಕಾರ‌್ಯಾಚರಣೆ ನಡೆಯುತ್ತಿರುವಾಗಲೇ ಭೂಕುಸಿತವಾಗಿ ಅಗ್ನಿಶಾಮಕ ದಳ ಸಿಬ್ಬಂದಿ ನಡುವೆ ಸಿಲುಕಿಕೊಂಡರು. ಸ್ಥಳೀಯರ ಸಹಕಾರದಿಂದ ಅವರನ್ನು ರಕ್ಷಿಸಲಾಯಿತು. ಘಾಟಿಯಲ್ಲಿ ರಕ್ಷಣಾ ಕಾರ‌್ಯಕ್ಕೆ ತೆರಳಿ ಮಣ್ಣಿನಡಿ ಸಿಲುಕಿದ್ದ ದ್ದ ಚಾರ್ಮಾಡಿ ಹಸನಬ್ಬ ಅವರ ಕಾರನ್ನು ಹೊರತೆಗೆಯಲಾಯಿತು. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಮತ್ತೆ ಕುಸಿತ, ಸಾಲಾಗಿ ನಿಂತ ವಾಹನಗಳು
ಘಾಟಿಯಲ್ಲಿ ಭಾರಿ ಮಳೆ ಮುಂದುವರಿದಿದ್ದು ಕುಸಿದಿರುವ ಮಣ್ಣನ್ನು ತೆರವು ಮಾಡುತ್ತಿರುವಾಗಲೇ ಮತ್ತೆ ಕುಸಿತಗಳು ಸಂಭವಿಸುತ್ತಿವೆ. ಘಾಟಿಯಲ್ಲಿ ಎರಡು ಜೆಸಿಬಿ ಹಾಗೂ ಒಂದು ಹಿಟಾಚಿ ಮಣ್ಣು ತೆಗೆಯುವ ಕಾರ‌್ಯ ಮಾಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು ಮರಗಳ ತೆರವು ಕಾರ‌್ಯಾಚರಣೆ ನಡೆಸುತ್ತಿದ್ದಾರೆ. ಎರಡು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು, ಚಾರ್ಮಾಡಿ ಗೇಟಿನ ಸಮೀಪ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا