Urdu   /   English   /   Nawayathi

ಭರ್ತಿಯಾಯ್ತು ಕದ್ರಾ ಜಲಾಶಯ

share with us

ಕಾರವಾರ: 05 ಆಗಸ್ಟ್ 2019 (ಫಿಕ್ರೋಖಬರ್ ಸುದ್ದಿ) ಕದ್ರಾ ಜಲಾಶಯ ಭರ್ತಿಯಾಗಿದ್ದು, ಭಾನುವಾರ 10 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಒಟ್ಟು ಐದು ಗೇಟ್​ಗಳಿಂದ ತಲಾ 2 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಕೆಲವೇ ತಾಸಿನಲ್ಲಿ ಜಲಾಶಯ ತುಂಬಿದೆ. 34.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಲ್ಲಿ ಭಾನುವಾರ ಬೆಳಗ್ಗೆ 33.70 ಮೀಟರ್ ನೀರು ಸಂಗ್ರಹವಾಗಿತ್ತು. 25,440 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಮಧ್ಯಾಹ್ನದ ಹೊತ್ತಿಗೆ ನೀರಿನ ಒಳಹರಿವು 38 ಸಾವಿರ ಕ್ಯೂಸೆಕ್​ನಷ್ಟಿದ್ದು, ನೀರಿನ ಮಟ್ಟ ಕೆಲವೇ ತಾಸಿನಲ್ಲಿ 34.03 ಮೀಟರ್ ತಲುಪಿತ್ತು. ಹೀಗಾಗಿ ನೀರನ್ನು ಹೊರಬಿಡಲಾಯಿತು. ಸೋಮವಾರ ಬೆಳಗಿನವರೆಗೂ ಇದೇ ಹಂತದಲ್ಲಿ ನೀರು ಬಿಡುವ ಸಾಧ್ಯತೆ ಇದೆ ಎಂದು ಕೆಪಿಸಿ ಕಾಳಿ ಯೋಜನೆಯ ಮುಖ್ಯ ಇಂಜಿನಿಯರ್ ನಿಂಗಣ್ಣ ತಿಳಿಸಿದ್ದಾರೆ. ಜುಲೈ 11 ರಂದು 2 ತಾಸಿನ ಮಟ್ಟಿಗೆ ಜಲಾಶಯದಿಂದ 4 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿತ್ತು. ಪ್ರವಾಹ ಭೀತಿ: ಕದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿರುವ ಕೆರವಡಿ, ಕಿನ್ನರ, ಸಿದ್ದರ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಜಾನುವಾರುಗಳನ್ನು ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬೇಕು ಎಂದು ಕೆಪಿಸಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸೂಪಾಕ್ಕೂ ಉತ್ತಮ ಒಳಹರಿವು: ಸೂಪಾ ಜಲಾಶಯಕ್ಕೂ ಉತ್ತಮ ಒಳಹರಿವು ಮುಂದುವರಿದಿದೆ. ಶುಕ್ರವಾರದಿಂದ ಭಾನುವಾರದವರೆಗೆ ಜಲಾಶಯದ ನೀರಿನ ಮಟ್ಟ 2 ಮೀಟರ್ ಏರಿಕೆಯಾಗಿದೆ. ಶನಿವಾರ 547.60 ಮೀಟರ್ ಇದ್ದ ನೀರಿನ ಮಟ್ಟ ಭಾನುವಾರ ಬೆಳಗಿನ ಹೊತ್ತಿಗೆ 548.60 ಮೀಟರ್​ಗೆ ತಲುಪಿದೆ. 36,884 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ, ನೀರು ಸಂಗ್ರಹಿಸುವ ದೃಷ್ಟಿಯಿಂದ ಇಲ್ಲಿ ಯಾವುದೇ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿಲ್ಲ. ನಾಗಝುರಿ, ಕೊಡಸಳ್ಳಿ ಹಾಗೂ ಕದ್ರಾದಲ್ಲಿ ನಿರಂತರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಪಂಚರಾಶಿವಾಡದಲ್ಲಿ ಮನೆಗೆ ನುಗ್ಗಿದ ನೀರು: ಕಾರವಾರ ಸಮುದ್ರದ ಅಬ್ಬರ ಹೆಚ್ಚಿದ್ದು, ನಗರದ ಕೋಡಿಬಾಗ ಪಂಚರಾಶಿವಾಡದಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಒಂದೆಡೆ ಸುರಿಯುತ್ತಿರುವ ಮಳೆ ಹಾಗೂ ಇನ್ನೊಂದೆಡೆ ಸಮುದ್ರದ ಉಬ್ಬರದಿಂದ ನೀರು ರಸ್ತೆಯನ್ನು ಆವರಿಸಿದ್ದಲ್ಲದೆ, ಹತ್ತಾರು ಮನೆಗಳ ಅಂಗಳದವರೆಗೂ ಬಂದಿದೆ. ಇದರಿಂದ ಜನ ಆತಂಕಗೊಂಡಿದ್ದಾರೆ. ಕಾಳಿ ನದಿ ನೀರು ಸೇರುವ ಅಳಿವೆ ಪ್ರದೇಶವಾದ ಇಲ್ಲಿ ಆಗೊಮ್ಮೆ ಈಗೊಮ್ಮೆ ಸಮುದ್ರದ ನೀರು ತುಂಬುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ನೀರು ರಸ್ತೆಗಳಲ್ಲಿ ತುಂಬಿ ಮನೆಗಳಿಗೂ ನುಗ್ಗುವ ಹಂತ ತಲುಪಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲೂಕಿನಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಇಡೀ ದಿನ ಮೋಡದ ವಾತಾವರಣವಿದ್ದು, ಆಗೊಮ್ಮೆ, ಈಗೊಮ್ಮೆ ದೊಡ್ಡ ಮಳೆ ಬಂದು ಮಾಯವಾಗುತ್ತಿತ್ತು.

ತಾಲೂಕುವಾರು ಮಳೆ ವರದಿ: ಭಾನುವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 28.8, ಹಳಿಯಾಳದಲ್ಲಿ 40.8, ಹೊನ್ನಾವರದಲ್ಲಿ 25.4, ಕಾರವಾರದಲ್ಲಿ 26,4, ಕುಮಟಾದಲ್ಲಿ 30, ಮುಂಡಗೋಡಿನಲ್ಲಿ 38.4, ಸಿದ್ದಾಪುರದಲ್ಲಿ 61.4, ಶಿರಸಿಯಲ್ಲಿ 85, ಜೊಯಿಡಾದಲ್ಲಿ 110.6, ಯಲ್ಲಾಪುರದಲ್ಲಿ 84.6 ಮಿಮೀ ಮಳೆಯಾಗಿದೆ.

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا