Urdu   /   English   /   Nawayathi

ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ

share with us

ಪುತ್ತೂರು: 04 ಜುಲೈ 2019 (ಫಿಕ್ರೋಖಬರ್ ಸುದ್ದಿ) ಪುತ್ತೂರಿನ ಕಾಲೇಜೊಂದರ ದಲಿತ ವಿದ್ಯಾರ್ಥಿನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಅದೇ ಕಾಲೇಜಿನ ವಿದ್ಯಾರ್ಥಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ತಡವಾಗಿ ಬುಧವಾರ ಬೆಳಕಿಗೆ ಬಂದಿದ್ದು, ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದ್ವಿತೀಯ ವರ್ಷದ ಪದವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸುನೀಲ್ ಆರ್ಯಾಪು(19), ಕಿಶನ್ ಪೆರ್ನೆ(19), ಪ್ರಖ್ಯಾತ್ ಬರಿಮಾರು(19), ಗುರುನಂದನ್ ಬಜತ್ತೂರು(19), ಪ್ರಜ್ವಲ್ ಪೆರ್ನೆ(19) ಆರೋಪಿಗಳು. ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿ ದ್ವಿತೀಯ ವರ್ಷದ ಪದವಿ ಕಲಾ ವಿಭಾಗದ ವಿದ್ಯಾರ್ಥಿನಿ. ಕಾರಿನಲ್ಲಿ ಅತ್ಯಾಚಾರ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಘಟನೆ ಬಹಿರಂಗಗೊಳ್ಳುತ್ತಿದ್ದಂತೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದು, ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅತ್ಯಾಚಾರ ಘಟನೆ ಫೆಬ್ರವರಿಯಲ್ಲಿ ನಡೆದಿದೆ ಎಂದು ವಿದ್ಯಾರ್ಥಿನಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.

ನಾಲ್ಕು ತಂಡ ರಚನೆ: ಬುಧವಾರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪುತ್ತೂರಿನ ಗ್ಯಾಂಗ್‌ರೇಪ್ ಬಗ್ಗೆ ಸುದ್ದಿ ಬಿತ್ತರವಾಗುತ್ತಿದ್ದಂತೆ ಬೆಳಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ಘಟನೆಯ ಪೂರ್ಣ ಮಾಹಿತಿ ಪಡೆದು ಕೇಸು ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕಾಗಿ ಪ್ರತ್ಯೇಕ ನಾಲ್ಕು ತಂಡ ರಚನೆ ಮಾಡಿದರು. ನಂತರ ಯುವತಿ ನೀಡಿದ ಅತ್ಯಾಚಾರ ದೂರಿನಂತೆ ಐಪಿಸಿ 12/19 ಸೆಕ್ಷನ್ 37, 63, 41, ಐಟಿ ಆ್ಯಕ್ಟ್ ಹಾಗೂ ವಿದ್ಯಾರ್ಥಿನಿ ಪರಿಶಿಷ್ಟ ಪಂಗಡಕ್ಕೆ ಸೇರಿದವಳಾಗಿದ್ದರಿಂದ ದಲಿತ ದೌರ್ಜನ್ಯ ಕೇಸು ದಾಖಲಾಗಿದೆ.
ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಆರು ತಿಂಗಳ ಹಿಂದಿನ ಘಟನೆ: ಸಾಮೂಹಿಕ ಅತ್ಯಾಚಾರ ನಡೆದಿರುವುದು ಫೆಬ್ರವರಿಯಲ್ಲಿ. ಕಾಲೇಜು ಮುಗಿಸಿ ಸಾಯಂಕಾಲ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿ ಇದ್ದ ವೇಳೆ ಕಾರಿನಲ್ಲಿ ಬಂದ ಅರೋಪಿಗಳು ‘ಸ್ವಲ್ಪ ಮಾತನಾಡಲು ಇದೆ’ ಎಂದು ಆಕೆಯನ್ನು ಕರೆದುಕೊಂಡು ಮುಖ್ಯರಸ್ತೆಯಿಂದ ಒಳ ರಸ್ತೆಗೆ ಹೋಗಿದ್ದರು. ಈ ರಸ್ತೆಯಲ್ಲಿ ಯಾಕೆ ಕರೆದುಕೊಂಡು ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಕಾರು ನಿಲ್ಲಿಸಿದ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿರುವ ಮಾಹಿತಿಯನ್ನು ಎಸ್‌ಪಿ ನೀಡಿದ್ದಾರೆ.

ಗಾಂಜಾ ನೀಡಿಲ್ಲ: ವಿದ್ಯಾರ್ಥಿನಿಗೆ ಗಾಂಜಾ ನೀಡಿ ಅತ್ಯಾಚಾರ ಎಸಗಲಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆದಿತ್ತು. ಆದರೆ ಅತ್ಯಾಚಾರ ಎಸಗಿದವರು ಯಾವುದೇ ಅಮಲು ಪದಾರ್ಥ ನೀಡಿಲ್ಲ ಎಂದು ವಿದ್ಯಾರ್ಥಿನಿ ವಿಚಾರಣೆ ವೇಳೆ ಹೇಳಿರುವುದನ್ನು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಆರೋಪಿಗಳು ಅಮಲು ಪದಾರ್ಥ ಸೇವಿಸಿದ್ದರೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ಕಾರು, ಘಟನಾ ಸ್ಥಳ ನಿಗೂಢ: ಸಂತ್ರಸ್ತ ವಿದ್ಯಾರ್ಥಿನಿ ನೀಡಿದ ದೂರಿನಲ್ಲಿ ಅತ್ಯಾಚಾರ ನಡೆದ ಸ್ಥಳ ಹಾಗೂ ಘಟನೆಗೆ ಬಳಸಿದ ಕಾರಿನ ಬಗ್ಗೆ ಮಾಹಿತಿ ಇಲ್ಲ. ಪೊಲೀಸರೂ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಆರೋಪಿಗಳು ಕಸ್ಟಡಿಯಲ್ಲಿದ್ದು, ತನಿಖೆ ಪ್ರಗತಿಯಲ್ಲಿರುವುದರಿಂದ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ. ಬಂಧಿತ ಐವರು ಆರೋಪಿಗಳು ಸ್ಥಳದಲ್ಲಿದ್ದಾರೆ ಎಂದಷ್ಟೇ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಅತ್ಯಾಚಾರಿಗಳು ಯಾರೆಂಬುದರ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಇನ್ನಷ್ಟು ಮಂದಿ ಘಟನೆಯ ಹಿಂದಿರುವ ಬಗ್ಗೆಯೂ ವಿಚಾರಣೆ ಬಳಿಕ ತಿಳಿಯಲಿದೆ ಎಂದು ಪೊಲೀಸರು ಹೇಳುತ್ತಾರೆ.

ಕಾಲೇಜಿಂದ ಅಮಾನತು: ಸಾಮೂಹಿಕ ಅತ್ಯಾಚಾರ ಪ್ರಕರಣ ಖಚಿತವಾಗುತ್ತಿದ್ದಂತೆ ಪುತ್ತೂರಿನ ಕಾಲೇಜು ಆರೋಪಿಗಳಾಗಿರುವ ಐವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕಾಲೇಜು ಆಡಳಿತವು ಈ ಬಗ್ಗೆ ಸಭೆ ನಡೆಸಿದ್ದು, ಪ್ರಾಂಶುಪಾಲರು ನಿರ್ಧಾರ ಪ್ರಕಟಿಸಿದ್ದಾರೆ.

ಎಬಿವಿಪಿಯಿಂದ ಮನವಿ: ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪಿಗಳು ಎಬಿವಿಪಿ ಕಾರ್ಯಕರ್ತರೆಂದು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಯುತ್ತಿದೆ. ಎಬಿವಿಪಿಗೂ ಅತ್ಯಾಚಾರ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ. ಪ್ರಕರಣದ ಸಮಗ್ರ ತನಿಖೆ ಹಾಗೂ ಎಬಿವಿಪಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರವೆಸಗುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದ.ಕ. ಜಿಲ್ಲಾ ಎಬಿವಿಪಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ರಿಗೆ ಮನವಿ ಸಲ್ಲಿಸಿದೆ.

ಬ್ಲಾೃಕ್‌ಮೇಲ್ ಮಾಡಿದ್ದ ಆರೋಪಿಗಳು: ಅತ್ಯಾಚಾರ ಎಸಗಿರುವುದನ್ನು ಆರೋಪಿಗಳಲ್ಲಿ ಓರ್ವನಾಗಿರುವ ಸುನೀಲ್ ಆರ್ಯಾಪು ಎಂಬಾತ ಚಿತ್ರೀಕರಣ ನಡೆಸಿದ್ದ. ಈ ನಡುವೆ, ಕಾಲೇಜು ಚುನಾವಣೆ ವಿಚಾರದಲ್ಲಿ ವಿದ್ಯಾರ್ಥಿನಿ ಮತ್ತು ಆರೋಪಿ ಸಹಪಾಠಿಗಳ ನಡುವೆ ಮನಸ್ತಾಪವಾಗಿತ್ತು. ಮತ್ತೆ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ಶೋಷಣೆ ನಡೆಸಲು ವಿದ್ಯಾರ್ಥಿಗಳು ಯತ್ನಿಸಿದ್ದರು. ವಿದ್ಯಾರ್ಥಿನಿ ಪ್ರತಿರೋಧ ತೋರಿಸಿದಾಗ, ಆರೋಪಿಗಳು ತಮ್ಮಲ್ಲಿ ವಿಡಿಯೋ ಇರುವುದಾಗಿ ಬ್ಲಾೃಕ್‌ಮೇಲ್ ಮಾಡಿದ್ದರು. ಆದರೆ ಆರೋಪಿಯ ಮೊಬೈಲ್‌ನಲ್ಲಿ ವಿಡಿಯೋ ಡಿಲೀಟ್ ಆಗಿತ್ತು. ಅದನ್ನು ರಿಕವರಿ ಮಾಡಲೆಂದು ಬೇರೊಬ್ಬರಿಗೆ ಮೆಮೊರಿ ಕಾರ್ಡ್ ನೀಡಿದ್ದು, ಅವರ ಮೂಲಕ ವಿಡಿಯೋ ವೈರಲ್ ಆಗಿದೆ ಎಂಬ ಮಾಹಿತಿ ‘ವಿಜಯವಾಣಿ’ಗೆ ಲಭಿಸಿದೆ.

ಕಾರೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ವಿಡಿಯೋವನ್ನು ಯಾರೂ ಹಂಚುವುದು, ಶೇಖರಿಸಿಡುವುದು ಅಪರಾಧವಾಗಿದೆ. ವಿದ್ಯಾರ್ಥಿನಿ ನೀಡಿದ ದೂರಿನಂತೆ ಅತ್ಯಾಚಾರ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಐವರು ಆರೋಪಿಗಳನ್ನು ಬಂಧಿಸಲಾಗಿದೆ.
 

ವಿ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا