Urdu   /   English   /   Nawayathi

‘ಮೋದಿಗೆ ಮತ ಹಾಕಿ’ ಎಂದು ಮದುವೆ ಕಾರ್ಡ್‌ ಮೇಲೆ ಮುದ್ರಿಸಿದ್ದಕ್ಕೆ ಆಯೋಗ ನೋಟಿಸ್

share with us

ನವದೆಹಲಿ: 17 ಮಾರ್ಚ್ (ಫಿಕ್ರೋಖಬರ್ ಸುದ್ದಿ) ‘ಮದುವೆಗೆ ಬರುವವರು ಗಿಫ್ಟ್ ತರಬೇಡಿ. ಆದರೆ ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ಹಾಕಿ, ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗಲಿ’ ಎಂದು ಮಗನ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ನಮೂದಿಸಿದ್ದ ತಂದೆಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಉತ್ತರಾಖಂಡ್‌ನ ಜೋಶಿಖೋಲಾ ಗ್ರಾಮದಲ್ಲಿ ಗೋಶಾಲೆ ನಡೆಸುವ ಜಗದೀಶ್ ಚಂದ್ರ ಜೋಶಿ ತಮ್ಮ ಮಗ ಜೀವನ್ ಮದುವೆ ನಿಮಿತ್ತ ರೂಪಿಸಿದ್ದ ಆಮಂತ್ರಣ ಪತ್ರಿಕೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ‘ತೋಫಾ ಮತ್ ಲಾನಾ ಕಿಂತು ವರ್ ವಧು ಕೋ ಆಶೀರ್ವಾದ್ ದೇನೆ ಕೆ ಪೆಹ್ಲೆ 11 ಏಪ್ರಿಲ್ ಕೊ ರಾಷ್ಟ್ರಹಿತ್‌ ಮೆ ಮೋದಿ ಜಿ ಕೊ ವೋಟ್ ಜರೂರ್‌ ಕರ್‌ ಆನಾ’ (ಮದುವೆಗೆ ಬರುವವರು ವಧುವರರಿಗೆ ಗಿಫ್ಟ್‌ ತರಬೇಡಿ, ಮದುಮಕ್ಕಳಿಗೆ ಆಶೀರ್ವಾದ ಮಾಡುವ ಮೊದಲು 11ನೇ ಏಪ್ರಿಲ್‌ ದಿನ ಮೋದಿಜಿಗೆ ಮತ ಹಾಕಿ) ಎಂದು ಆಮಂತ್ರಣ ಪತ್ರಿಕೆಯಲ್ಲಿ ಕೋರಿದ್ದಾರೆ. ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಆರೋಪದ ಮೇಲೆ ಬಾಗೇಶ್ವರದ ಸಹಾಯಕ ಚುನಾವಣಾ ಅಧಿಕಾರಿ (ಎಆರ್‌ಒ) ಜೋಶಿ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ಜಿಲ್ಲಾ ಚುನಾವಣಾ ಅಧಿಕಾರಿ ರಂಜನಾ, ‘ಆಮಂತ್ರಣ ಪತ್ರದಲ್ಲಿ ಬಿಜೆಪಿ ಪರ ಘೋಷಣೆ ಮುದ್ರಿಸಿದ್ದವರಿಗೆ ಎಆರ್‌ಒ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. ಆರೋಪಿಗಳಿಗೆ 24 ಗಂಟೆಗಳ ಒಳಗೆ ಖುದ್ದು ಹಾಜರಾಗಿ ವಿವರಣೆ ನೀಡಲು ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ. ‘ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಬೇಕಾದ ಬರಹವನ್ನು ನನ್ನ ಮಕ್ಕಳು ಕೊಟ್ಟಿದ್ದರು. ನನ್ನಿಂದ ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಆಯೋಗವನ್ನು ಕೋರುತ್ತೇನೆ. ನಾವು ಸಾಮಾನ್ಯ ಜನ. ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರಲ್ಲ’ ಎಂದು ಜೋಶಿ ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಲೋಕಸಭೆ ಚುನಾವಣೆಗಳು ಏಪ್ರಿಲ್ 11ರಂದು ನಡೆಯಲಿವೆ. ಜೋಶಿ ಅವರ ಮಗನ ಮದುವೆಯ ಮುಹೂರ್ತ ಏಪ್ರಿಲ್ 22ಕ್ಕೆ ಇದೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا