Urdu   /   English   /   Nawayathi

BIG NEWS : ಸದ್ದಿಲ್ಲದೇ ನಡೆದಿದೆಯೇ ಮತ್ತೊಂದು ಸರ್ಜಿಕಲ್ ಸ್ಟ್ರೈಕ್….!

share with us

ಮುಜಾಫರ್‍ನಗರ್(ಉ.ಪ್ರ.): 29 ಸೆಪ್ಟೆಂಬರ್ (ಫಿಕ್ರೋಖಬರ್ ಸುದ್ದಿ) ಕಾಶ್ಮೀರ ಕಣಿವೆಯಲ್ಲಿ ಭದ್ರತಾಪಡೆಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ಮತ್ತು ಪಾಕಿಸ್ತಾನಿ ಸೈನಿಕರು ನಡೆಸುತ್ತಿರುವ ಹಿಂಸಾ ಕೃತ್ಯಗಳಿಗೆ ಭಾರತ ದಿಟ್ಟ ಸೇಡಿನ ಪ್ರತ್ಯುತ್ತರ ನೀಡಿದೆಯೇ..? 2-3 ದಿನಗಳ ಹಿಂದೆ ದೊಡ್ಡ ಮಟ್ಟದ ಏನೋ ಒಂದು ನಡೆದಿದೆ ಎಂಬುದನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೂಚ್ಯವಾಗಿ ತಿಳಿಸುವ ಮೂಲಕ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಸಾಧ್ಯತೆ ಸುದ್ದಿಗಳಿಗೆ ಪುಷ್ಟಿ ನೀಡಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರ ಶಿಬಿರಗಳ ಮೇಲೆ ಭಾರತೀಯ ಸೇನಾ ಪಡೆಗಳು ಮಿಂಚಿನ ದಾಳಿ ನಡೆದ 50ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿ ಪಾಕ್‍ಗೆ ಮರ್ಮಾಘಾತ ನೀಡಿದ ಸರ್ಜಿಕಲ್ ಸ್ಟ್ರೈಕ್ ಇಂದು ಎರಡು ವರ್ಷಾಚರಣೆಗೆ ಮುನ್ನಾ ದಿನ ಸಚಿವರ ಈ ಮಾರ್ಮಿಕ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ. ಸಚಿವರ ಈ ಪರೋಕ್ಷ ಹೇಳಿಕೆ ಪಾಕ್ ಬೆಂಬಲಿತ ಉಗ್ರರು ಮತ್ತು ಪಾಕಿಸ್ತಾನದ ಯೋಧರ ವಿರುದ್ಧ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದಿರುವ ಸಾಧ್ಯತೆಗೆ ಪುಷ್ಟಿ ನೀಡಿದೆ.

ಉತ್ತರ ಪ್ರದೇಶದ ಮುಜಾಫರ್‍ನಗರ್‍ನಲ್ಲಿ ನಿನ್ನೆ ರಾತ್ರಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಇತ್ತೀಚೆಗೆ ಬಿಎಸ್‍ಎಫ್ ಮುಖ್ಯ ಪೇದೆ ನರೇಂದ್ರ ಸಿಂಗ್ ಅವರನ್ನು ಪಾಕಿಸ್ತಾನದ ಕ್ರೂರ ಸೈನಿಕರು ಶಿರಚ್ಛೇದನ ಮಾಡಿ ಕಣ್ಣು ಕಿತ್ತು ದೇಹವನ್ನು ವಿರೂಪಗೊಳಿಸಿದ ಕೃತ್ಯದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.  ಈ ಕೃತ್ಯ ನೋಡಿಕೊಂಡು ನಮ್ಮ ಯೋಧರು ಸುಮ್ಮನೇ ಕುಳಿತಿಲ್ಲ. ಎರಡು ಮೂರು ದಿನಗಳ ಹಿಂದೆ ಏನೋ ಒಂದು ಸಂಗತಿ ನಡೆದಿದೆ ಹಾಗೂ ಅದು ಚೆನ್ನಾಗಿಯೇ ಆಗಿದೆ ಎಂದು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದಿರಬಹುದಾದ ಬಗ್ಗೆ ಸೂಕ್ಷ್ಮ ಮುನ್ಸೂಚನೆ ನೀಡಿದರು.

ಈ ಘಟನೆ ಬಗ್ಗೆ ವಿವರಿಸಲಿಲ್ಲವಾದರೂ, ಇತ್ತೀಚಿನ ಘಟನೆಗಳ ಬಗ್ಗೆ ಕೆಲವರಿಗೆ ತಿಳಿದಿದೆ. ಇದಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದು ಸದ್ಯದಲ್ಲೇ ಎಲ್ಲರಿಗೂ ಗೊತ್ತಾಗಲಿದೆ ಎಂದು ಅವರು ತಿಳಿಸಿದರು. ರಾಜನಾಥ್ ಇತ್ತೀಚೆಗೆ ಭಾಗವಹಿಸುತ್ತಿರುವ ಸಭೆ-ಸಮಾರಂಭಗಳಲ್ಲಿ ಪಾಕಿಸ್ತಾನ ತನ್ನ ಬಂದೂಕಿನಿಂದ ಒಂದು ಬುಲೆಟ್ ಹಾರಿಸಿದರೆ, ನಾವು ಹಾರಿಸುವ ಗುಂಡುಗಳಿಗೆ ಲೆಕ್ಕವಿಡಲು ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು.

ನಿನ್ನೆ ಸಭೆಯಲ್ಲೂ ಕೂಡ ಗೃಹ ಸಚಿವರು ಇದೇ ಮಾತನ್ನು ಪುನರುಚ್ಚರಿಸಿದರು. ಅಪ್ರಚೋದಿತವಾಗಿ ಗುಂಡು ಹಾರಿಸಬೇಡಿ. ಆದರೆ ಪಾಕಿಸ್ತಾನ ಒಂದೇ ಒಂದು ಬುಲೆಟ್ ಹಾರಿಸಿದಾಗ, ಭಾರತವು ಹಾರಿಸುವ ಗುಂಡುಗಳಿಗೆ ಲೆಕ್ಕ ಇಡಬೇಡಿ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ ಎಂದು ರಾಜನಾಥ್ ಸಿಂಗ್ ತಿಳಿಸಿದರು. ನಮ್ಮ ಬಿಎಸ್‍ಎಫ್ ಯೋಧರನ್ನು ಪಾಕಿಸ್ತಾನ ಅತ್ಯಂತ ಬರ್ಬರವಾಗಿ ಕೊಂದು ಹಾಕಿರುವುದು ನಿಮಗೆಲ್ಲಾ ಗೊತ್ತಿದೆ. ಇದಕ್ಕಾಗಿ ನಮ್ಮಿಂದ ಏನೋ ಒಂದು ಪ್ರತ್ಯುತ್ತರದ ಸಂಗತಿ ನಡೆದಿದೆ. ಆ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಏನೋ ಒಂದು ಸಂಗತಿ ನಡೆದಿರುವುದು ದಿಟ. ಅದು ನಿರೀಕ್ಷೆಗಿಂತ ಚೆನ್ನಾಗಿಯೇ ಆಗಿದೆ.

ಎರಡು ಮೂರು ದಿನಗಳ ಹಿಂದಷ್ಟೇ ಅದು ಸರಿಯಾದ ರೀತಿಯಲ್ಲೇ ನಡೆದಿದೆ ಎಂಬುದನ್ನು ನೀವು ನಂಬಿ. ಮುಂದೆಯೂ ಇದು ಸಾಗುತ್ತದೆ. ಮೊದಲು ನೀವೇ ಗುಂಡು ಹಾರಿಸಬೇಡಿ ಎಂದು ನಾನು ಬಿಎಸ್‍ಎಫ್ ಯೋದರಿಗೆ ತಿಳಿಸಿದ್ದೇನೆ. ಆದರೆ ಅತ್ತ ಕಡೆಯಿಂದ ಒಂದೇ ಒಂದು ಗುಂಡು ಹಾರಿಬಂದರೂ ನಮ್ಮ ಬುಲೆಟ್‍ಗಳಿಗೆ ಪಾಕಿಸ್ತಾನ ಲೆಕ್ಕವಿಡಲು ಸಾಧ್ಯವಿಲ್ಲ ಎಂಬುದನ್ನು ನಾನು ನಮ್ಮ ಯೋಧರಿಗೆ ತಿಳಿಸಿದ್ದೇನೆ ಎಂದು ಸಿಂಗ್ ಹೇಳಿದರು.

ಮುಂದೆಯೂ ಕೂಡ ಇದೇ ರೀತಿಯ ಸಂಗತಿಗಳು (ಪಾಕಿಸ್ತಾನದ ಉಗ್ರರು ಮತ್ತು ಕ್ರೂರ ಸೈನಿಕರನ್ನು ಸದೆಬಡಿಯುವ ಕಾರ್ಯಾಚರಣೆ) ಮುಂದುವರಿಯುತ್ತದೆ. ಭವಿಷ್ಯದಲ್ಲಿ ಅದು ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ಹೇಳಿದರು. ಬಿಎಸ್‍ಎಫ್ ಹೆಡ್ ಕಾನ್ಸ್‍ಟೆಬಲ್ ನರೇಂದ್ರ ಸಿಂಗ್ ಅವರನ್ನು ಪಾಕಿಸ್ತಾನಿ ಗಡಿ ಕ್ರಿಯಾ ತಂಡದ(ಬ್ಯಾಟ್) ಕ್ರೂರ ರೇಂಜರ್‍ಗಳು ನಿರ್ದಯವಾಗಿ ಕೊಂದು ತಲೆ ಕತ್ತರಿಸಿ ಕಣ್ಣುಗಳನ್ನು ಕಿತ್ತು ದೇಹವನ್ನು ವಿರೂಪಗೊಳಿಸಿದ ನಂತರ ಭಾರತೀಯ ಯೋಧರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಕ್ರೌರ್ಯಕ್ಕೆ ತಕ್ಕ ಪಾಠ ಕಲಿಸಲು ಮತ್ತೊಂದು ಸುತ್ತಿನ ಸರ್ಜಿಕಲ್ ಸ್ಟ್ರೈಕ್ ನಡೆಸುವ ಅಗತ್ಯವಿದೆ ಎಂಬುದನು ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಒತ್ತಿ ಹೇಳಿದ್ದರು. ಈಗ ಗೃಹ ಸಚಿವರ ಈ ಹೇಳಿಕೆ ಎರಡು ಮೂರು ದಿನಗಳ ಹಿಂದೆ ಮತ್ತೊಂದು ಸೀಮಿತ ದಾಳಿ ನಡೆದಿರುವ ಸಾಧ್ಯತೆಗೆ ಪುಷ್ಟಿ ನೀಡುವಂತಿದೆ.

ಈ, ಸಂ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا