Urdu   /   English   /   Nawayathi

ನರಕಯಾತನೆಯಿಂದ 24 ಗೆಳತಿಯರ ಕಾಪಾಡಿದ ಬಾಲೆಯ ಕರುಣಾಜನಕ ಕಥೆ

share with us

ಲಖನೌ: 08 ಆಗಸ್ಟ್ (ಫಿಕ್ರೋಖಬರ್ ಸುದ್ದಿ) ಆಕೆ ಪುಟ್ಟ ಬಾಲಕಿಯಾದರೂ ವಯಸ್ಸಿಗೂ ಮೀರಿದ ಸಾಹಸ, ಧೈರ್ಯ ಪ್ರದರ್ಶಿಸಿ ದೇಶದ ಗಮನ ಸೆಳೆದಿದ್ದಾಳೆ. ಅಲ್ಲದೆ, ತನ್ನಂತೆ ಚಿತ್ರಹಿಂಸೆ ಅನುಭವಿಸುತ್ತಿದ್ದ ಇನ್ನೂ 24 ಬಾಲಕಿಯರನ್ನು ನರಕಯಾತನೆಯಿಂದ ಪಾರು ಮಾಡಿದ್ದಾಳೆ. ದಿಯೋರಿಯಾ ಲೈಂಗಿಕ ದೌರ್ಜನ್ಯದ ಕರಾಳ ಕಥೆ ಬೆಳಕಿಗೆ ಬರಲು ಕಾರಣಳಾದ 12 ವರ್ಷದ ಬಾಲಕಿಯ ಹಿಂದೆ ಕರುಣಾಜನಕ ಕಥೆ ಇದೆ. ಬಿಹಾರದ ಬೇತಿಯಾದ ನಿವಾಸಿಯಾಗಿದ್ದ ಆಕೆ 2 ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡಿದ್ದಳು. ತಂದೆ ಮರುಮದುವೆಯಾದ ಬಳಿಕ ಬದುಕು ಮತ್ತಷ್ಟು ದುಸ್ತರವಾಯಿತು. ಜವಾಬ್ದಾರಿ ಹೊರಲು ಮಲತಾಯಿ ನಿರಾಕರಿಸಿದ್ದರಿಂದ ತಂದೆ ಆಕೆಯನ್ನು ಅಜ್ಜಿಯ ಮನೆಗೆ ಕಳುಹಿಸಿದ. 

ಆಕೆಯ ಕಷ್ಟಗಳು ಅಲ್ಲಿಗೆ ಮುಗಿಯಲಿಲ್ಲ, ಬದಲಾಗಿ ಹೆಚ್ಚುತ್ತಲೇ ಹೋಯಿತು. ಆಕೆಗೆ 9 ವರ್ಷಗಳಾದಾಗ ನಿನ್ನ ತಾಯಿಗೆ ಸಾವಿಗೆ ಕಾರಣ ನೀನೇ ಎಂದು ಆರೋಪಿಸಿದ ಅಜ್ಜಿ ಮನೆಯಿಂದ ಹೊರಗಟ್ಟಿದ್ದಾಳೆ. ಸಂಬಂಧಿಕರಲ್ಲಿ ಯಾರು ಕೂಡ ಆಕೆಯನ್ನು ಸ್ವೀಕರಿಸಲಿಲ್ಲ. 

ಏನು ಅರಿಯದ ಮುಗ್ಧ ಕೂಸು ಬೀದಿಯಲ್ಲಿ ಅಲೆಯುತ್ತ ಸಾಗಿದೆ. ಹೀಗೆ ಒಂದು ದಿನ ಆಕೆಯನ್ನು ಕಂಡ ಜಿಆರ್‌ಪಿ ಸೈನಿಕ ಆಕೆಯನ್ನು ರಕ್ಷಿಸಿದ್ದಾನೆ. ಬಳಿಕ ಅವಳನ್ನು ವಿದ್ಯಾವಾಸಿನಿ ಬಾಲಿಕಾ ಸಂರಕ್ಷಣಾ ಗೃಹಕ್ಕೆ ಕಳುಹಿಸಲಾಯಿತು. ಅವಳು ಬಂದಿದ್ದು ರಕ್ಷಣಾ ತಾಣಕ್ಕಾಗಿರಲಿಲ್ಲ. ಬದಲಾಗಿ ನರಕದ ಕೂಪಕ್ಕಾಗಿತ್ತು. ಕಳೆದ 3 ವರ್ಷದಿಂದ ಅಲ್ಲಿದ್ದ ಆಕೆಯ ಬದುಕು ಮತ್ತಷ್ಟು ದುರಂತಮಯವಾಯಿತು. 
ಬಾಲಿಕಾ ಗೃಹದಲ್ಲಿ ಗೃಹದಲ್ಲಿ ಲೈಂಗಿಕ ಕಿರುಕುಳವನ್ನು ತಾಳಲಾರದೆ ಅಲ್ಲಿಂದ ಪರಾರಿಯಾದ ಬಾಲಕಿ, ಪೊಲೀಸರಿಗೆ ಸುದ್ದಿ ಮುಟ್ಟಿಸುವ ಮೂಲಕ ದೊಡ್ಡ ಹಗರಣವನ್ನು ಬಯಲು ಮಾಡಿದಳು. ಬಾಲಿಕಾ ಗೃಹದಲ್ಲಿ ನಡೆಯುತ್ತಿದ್ದ ಪೈಶಾಚಿಕ ಕ್ರೌರ್ಯವನ್ನು ಆಕೆ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದು ಹೀಗೆ: '' ಸ್ವಲ್ಪ ದೊಡ್ಡ ವಯಸ್ಸಿನ ಹುಡುಗಿಯರನ್ನು ರಾತ್ರಿ ಹೊತ್ತು ಕಾರಿನಲ್ಲಿ ಬಲವಂತವಾಗಿ ಕಳುಹಿಸಲಾಗುತ್ತಿತ್ತು. ಬೆಳಗ್ಗೆ ಅವರು ಬಾಲಿಕಾ ಗೃಹಕ್ಕೆ ವಾಪಸಾದಾಗ ಅವರ ಮುಖದಲ್ಲಿ, ಭಯ, ದುಃಖ ಕಾಣುತ್ತಿತ್ತು. ಅವರು ಇಡೀ ದಿನ ಅಳುತ್ತಿದ್ದರು. ಚಿಕ್ಕ ಮಕ್ಕಳನ್ನು ಕೂಲಿಯವರಿಗಿಂತಲೂ ಕಡೆಯಾಗಿ ಬಳಸಿಕೊಳ್ಳಲಾಗುತ್ತಿತ್ತು. ಮೇಡಮ್‌ ಅವರು ಕೆಲವು ಬಾರಿ ಇಬ್ಬಿಬ್ಬರು ಹುಡುಗಿಯರನ್ನು ಗೋರಖ್‌ಪುರದ ರೂಮ್‌ವೊಂದಕ್ಕೆ ಕಳುಹಿಸುತ್ತಿದ್ದರು. ನನ್ನನ್ನೂ ಅವರೊಂದಿಗೆ ಒಮ್ಮೆ ಕಳುಹಿಸಲಾಗಿತ್ತು. ಅಲ್ಲಿ ಹುಡುಗಿಯರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು,'' ಎಂದು ಬಾಲಕಿ ಹೇಳಿದ್ದಾಳೆ. 

''ಚಿತ್ರಹಿಂಸೆ ತಾಳಲಾರದೆ ತಪ್ಪಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ಸಮಯ ನೋಡಿ ತಪ್ಪಿಸಿಕೊಂಡು ಹೊರಗೆ ಓಡಿದೆ. ಸೀದಾ ಪೊಲೀಸ್‌ ಠಾಣೆಗೆ ಹೋಗಿ ಸುದ್ದಿ ಮುಟ್ಟಿಸಿದೆ,'' ಎಂದು ಬಾಲಕಿ ಹೇಳಿದ್ದಾಳೆ. 

'ಮಾ ವಿದ್ಯಾವಾಸಿನಿ ಮಹಿಳಾ ಪರೀಕ್ಷಣ್‌ ಏವಂ ಸಮಾಜ ಸೇವಾ ಸಂಸ್ಥಾನ'ದಲ್ಲಿ 42 ಬಾಲಕಿಯರು ಆಶ್ರಯ ಪಡೆದಿದ್ದರು. ಭಾನುವಾರ ಇಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕಿ ಪೊಲೀಸರ ಮುಂದೆ ಲೈಂಗಿಕ ಕಿರುಕುಳದ ಬಗೆಗಿನ ಕರಾಳ ಅನುಭವ ಹಂಚಿಕೊಂಡ ಬಳಿಕ ಪೊಲೀಸರು ಕಾರ್ಯಾಚರಣೆಗೆ ಇಳಿದು ಈ ಆಶ್ರಯ ತಾಣವನ್ನು ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ ಮತ್ತು ಮೋಹನ್‌ ತ್ರಿಪಾಠಿ ದಂಪತಿಯನ್ನು ಬಂಧಿಸಿದ್ದಾರೆ. ನಿಲಯಕ್ಕೆ ಬೀಗ ಜಡಿಯಲಾಗಿದ್ದು, ಕಣ್ಮರೆಯಾಗಿರುವ 18 ಬಾಲಕಿಯರಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸರಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬ ಆರೋಪದ ಮೇರೆಗೆ 2017ರಲ್ಲಿಯೇ ಸರಕಾರ, ನಿಲಯಕ್ಕೆ ನೀಡಲಾಗುತ್ತಿದ್ದ ಅನುದಾನವನ್ನು ನಿಲ್ಲಿಸಿತ್ತು. ಆದಾಗ್ಯೂ ಎನ್‌ಜಿಒ ಇದನ್ನು ಇಲ್ಲಿಯವರೆಗೂ ನಡೆಸಿಕೊಂಡು ಬಂದಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೀಟಾ ಬಹುಗುಣ ಜೋಷಿ ಹೇಳಿದ್ದಾರೆ. 

ವಿ, ಕ ವರದಿ   

Prayer Timings

Fajr فجر
Dhuhr الظهر
Asr أسر
Maghrib مغرب
Isha عشا