Urdu   /   English   /   Nawayathi

ಕೈ ಕಟ್ಟಿ ಕೂತರೆ ಕಾವೇರಿ ನೀರಿಲ್ಲ

share with us

ಬೆಂಗಳೂರು: 27 ಜೂನ್ (ಫಿಕ್ರೋಖಬರ್ ಸುದ್ದಿ) ಕಾವೇರಿ ನೀರಿನ ಹೋರಾಟದಲ್ಲಿ ಕೈ ಕಟ್ಟಿ ಕುಳಿತರೆ ರೈತರಿಗೆ ನೀರು ಸಿಗುವುದು ಕಷ್ಟ ಎಂಬ ಅಭಿಪ್ರಾಯ ಮಂಡ್ಯ ಜಿಲ್ಲೆಯ ಕಾಂಗ್ರೆಸ್‌ ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ವ್ಯಕ್ತವಾಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆಯಲ್ಲಿ ಸೋತ ಮಂಡ್ಯ ಹಾಗೂ ಹಾಸನ ಜಿಲ್ಲೆಯ ಕಾಂಗ್ರೆಸ್‌ ಅಭ್ಯರ್ಥಿಗಳು ಸಭೆ ಸೇರಿ ಪಕ್ಷ ಹಾಗೂ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ, ಕಾವೇರಿ ನದಿ ನೀರಿನ ಹಂಚಿಕೆ ವಿಷಯದಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕಾವೇರಿ ನೀರಿನ ಹಂಚಿಕೆ ವಿಷಯ ಬಂದಾಗ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದರು. ಆದರೆ, ಈಗ ಕೇಂದ್ರ ಸರ್ಕಾರ ಕಾವೇರಿ ನೀರು ಹಂಚಿಕೆಗೆ ಪ್ರಾಧಿಕಾರ ರಚನೆ ಮಾಡಿದ್ದು, ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಮೌನವಾಗಿದ್ದಾರೆಂದು ಸಭೆಯಲ್ಲಿ ಕೆಲವರು ಅಸಮಾಧಾನ ಹೊರ
ಹಾಕಿದ್ದಾರೆಂದು ತಿಳಿದು ಬಂದಿದೆ.

ಮಂಡ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಸೋತಿರುವುದು, ತಮ್ಮ ವಿರುದ್ಧ ಜಯಗಳಿಸಿರುವ ಜೆಡಿಎಸ್‌ನೊಂದಿಗೆ ಸರ್ಕಾರ ಮಾಡಿಕೊಂಡಿರುವುದು ಜಿಲ್ಲಾ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಆತಂಕವನ್ನು ಅಭ್ಯರ್ಥಿಗಳು
ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕೈ ಕಟ್ಟಿ ಕುಳಿತರೆ ಜಿಲ್ಲೆಯ ರೈತರಿಗೆ ನೀರು ದೊರೆಯದೆ
ಅನ್ಯಾಯವಾಗುವ ಸಾಧ್ಯತೆ ಇದೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ ಪಾಲುದಾರ ಪಕ್ಷವಾಗಿರುವುದರಿಂದ ಸರ್ಕಾರದ ವಿರುದ್ಧ ನೇರವಾಗಿ ಹೋರಾಟ ನಡೆಸದೆ ಪಕ್ಷದ ನಾಯಕರ ಗಮನಕ್ಕೆ ತಂದು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.

ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೇವಲ 5 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. ಅಲ್ಲದೇ, ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆಂಬ ಕಾರಣಕ್ಕೆ ಒಕ್ಕಲಿಗ ಸಮುದಾಯ ಜೆಡಿಎಸ್‌ಗೆ ಮತ ಹಾಕಿದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಅದೇ ಫ‌ಲಿತಾಂಶ ಬರುವುದಿಲ್ಲ. ಹೀಗಾಗಿ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಲು ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆ ನಂತರ ಮಾತನಾಡಿದ ಮಾಜಿ ಸಚಿವ ಚಲುವರಾಯ ಸ್ವಾಮಿ, ಮಂಡ್ಯ ಹಾಗೂ ಹಾಸನ  ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಸಂಪೂರ್ಣ ಸೋತಿದೆ. ಆದರೂ, ಪಕ್ಷವನ್ನು ಹಲವಾರು ವರ್ಷಗಳಿಂದ ಸಂಘಟಿಸಲಾಗಿದೆ. ರಾಜಕಾರಣದ ಸಮಸ್ಯೆಗಿಂತ ಕಾವೇರಿ ಸಮಸ್ಯೆ ನಮಗೆ ಪ್ರಮುಖವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕಾವೇರಿ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆ ಆಗಿತ್ತು. ಆದರೆ, ಈಗ ಮೈತ್ರಿ ಸರ್ಕಾರದಲ್ಲಿ ಅಂತಹ ಉತ್ಸಾಹ ಕಂಡು ಬರುತ್ತಿಲ್ಲ.

ಮೈತ್ರಿ ಸರ್ಕಾರ ರಚನೆಯಾದ ಮೇಲೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡುತ್ತಿಲ್ಲ. ದೇವೇಗೌಡರು ಮಾತನಾಡುತ್ತಿಲ್ಲ ಎಂದು ಅನೇಕರು ಹೇಳಿದ್ದಾರೆ. ಕೇಂದ್ರದೊಂದಿಗೆ ಸಂಘರ್ಷಕ್ಕೆ ಇಳಿಯದಂತೆ
ದೇವೇಗೌಡರು ಹೇಳಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ, ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಿ ಮಾತನಾಡುತ್ತೇವೆ ಎಂದರು.

ಮೈತ್ರಿ ಸರ್ಕಾರದ ಭಾಗವಾಗಿರುವುದರಿಂದ ಸರ್ಕಾರದ ವಿರುದ್ದ ಹೋರಾಟ ಮಾಡಲು ಆಗುವುದಿಲ್ಲ. ಮಂಡ್ಯದಲ್ಲಿ ಸಭೆ ಮಾಡಿದ್ದರೆ, ಹೋರಾಟದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಹೀಗಾಗಿ, ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ
ಯನ್ನು ಭೇಟಿ ಮಾಡಿಲ್ಲ. ಅಂತಹ ಸ್ಥಿತಿ ನಿರ್ಮಾಣವಾಗಿಲ್ಲ. ಅವರ ನಮ್ಮ ಹಿಂದಿನ ಸ್ನೇಹ ಈಗ ಉಳಿದಿಲ್ಲ. ಇದೇ ವೇಳೆ, ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಸಭೆಯಲ್ಲಿ
ರಮೇಶ್‌ ಬಂಡಿಸಿದ್ದೇಗೌಡ, ಕೆ.ಬಿ. ಚಂದ್ರಶೇಖರ್‌, ಗುರು ಚರಣ್‌, ರಾಮಕೃಷ್ಣ, ನರೇಂದ್ರಸ್ವಾಮಿ, ಮಾಗಡಿ ಬಾಲಕೃಷ್ಣ ಪಾಲ್ಗೊಂಡಿದ್ದರು.

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا