Urdu   /   English   /   Nawayathi

ರಾಜ್ಯ ಹೊರಗಿಟ್ಟು ಪ್ರಾಧಿಕಾರ ರಚಿಸಿರುವುದಕ್ಕೆ ಸಿಎಂ ಸಿಟ್ಟು

share with us

ಬೆಂಗಳೂರು: 24 ಜೂನ್ (ಫಿಕ್ರೋಖಬರ್ ಸುದ್ದಿ) ಕರ್ನಾಟಕವನ್ನು ಹೊರಗಿಟ್ಟು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ನಮ್ಮ ಸಹನೆಯನ್ನು ದೌರ್ಬಲ್ಯ ಎಂದುಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. 

ಶನಿವಾರ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಶಕ್ತಿ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ಕಾನೂನು ತಜ್ಞರ ಜೊತೆಗೆ ಚರ್ಚಿಸಿದ್ದೇನೆ. ಅಡ್ವೋಕೇಟ್‌ ಜನರಲ್‌ ಸಲಹೆ ಪಡೆದು ಮುಂದುವರಿಯುತ್ತೇನೆ. ಕೇಂದ್ರ ಸರ್ಕಾರದಲ್ಲಿ ಸಂಬಂಧಪಟ್ಟವರಿಗೂ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ರಚಿಸಿರುವುದರಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಲಾಗಿತ್ತು. ಅದರ ಕುರಿತು ಚರ್ಚೆ ಆಗಬೇಕು ಎಂದು ಮನವಿ ಮಾಡಿದ್ದೆ. ಆದರೆ, ಅದು ಆಗಿಲ್ಲ. ಲೋಕಸಭೆಯಲ್ಲೂ ಚರ್ಚೆ ಆಗಿಲ್ಲ. ಕೇಂದ್ರ ಸಚಿವರನ್ನೂ ಭೇಟಿ ಮಾಡಿದ್ದೇನೆ. ಕಾನೂನಿಗೆ ನಾವು ತಲೆ ಬಾಗಲೇಬೇಕು. ಹಾಗಂತ ನಮ್ಮ ಸಲಹೆಗಳನ್ನು ನಗಣ್ಯ ಮಾಡುವುದು, ನಮ್ಮ ಸಹನೆಯನ್ನು ದೌರ್ಬಲ್ಯ ಎಂದು ತಿಳಿದುಕೊಂಡರೆ ಅದು ಸರಿಯಲ್ಲ ಎಂದರು. 

ಈ ಸಂಬಂಧ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಸಂಪರ್ಕ ಮಾಡಿದ್ದೇನೆ. 15 ದಿನಗಳೊಳಗೆ ಭೇಟಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಕಾನೂನು ತಜ್ಞರ ಜೊತೆಗೂ ಚರ್ಚಿಸಿದ್ದೇನೆ. ಅಡ್ವೋಕೇಟ್‌ ಜನರಲ್‌ ಸಲಹೆ ಪಡೆದು ಮುಂದೇನು ಮಾಡಬೇಕೆಂದು ತೀರ್ಮಾನಿಸುತ್ತೇನೆ. ಕೇಂದ್ರ ಸಚಿವರನ್ನೂ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಸಂಬಂಧಪಟ್ಟವರಿಗೆ ಪತ್ರ ಸಹ ಬರೆಯುತ್ತೇನೆ ಎಂದು ತಿಳಿಸಿದರು. 

ಇನ್ನೆರಡು ದಿನದಲ್ಲಿ ಹೆಸರು
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣಾ ಸಮಿತಿ ರಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವುದರಿಂದ ಪ್ರಾಧಿಕಾರ ಮತ್ತು ಸಮಿತಿಗೆ ಇನ್ನೆರಡು ದಿನಗಳಲ್ಲಿ ಹೆಸರುಗಳನ್ನು ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯವನ್ನು ಪ್ರತಿನಿಧಿಸುವ ಸದಸ್ಯರಾಗಿ ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಖೇಶ್‌ ಸಿಂಗ್‌ ಹಾಗೂ ನೀರು ನಿಯಂತ್ರಣಾ ಸಮಿತಿಗೆ ರಾಜ್ಯದ ಸದಸ್ಯರಾಗಿ 20 ಮುಖ್ಯ ಎಂಜಿನಿಯರ್‌ಗಳ ಪೈಕಿ ಒಬ್ಬರ ಹೆಸರನ್ನು ಅಂತಿಮಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ಹೆಸರು ಶಿಫಾರಸು ಮಾಡಲಾಗುವುದು ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಈ ಮಧ್ಯೆ ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಹೀಗಾಗಿ ಮುಂದಿನ ಸಭೆಯೊಳಗೆ ಸರ್ಕಾರ ಹೆಸರು ಶಿಫಾರಸು ಮಾಡಿದರೆ ಪ್ರಾಧಿಕಾರ ಮತ್ತು ಸಮಿತಿಯಲ್ಲಿ ರಾಜ್ಯದ ಪ್ರಾತಿನಿಧ್ಯಕ್ಕೆ ಯಾವುದೇ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ಜಲ ಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಥವಾ ಸಮಿತಿಯಿಂದ ರಾಜ್ಯಕ್ಕೆ ಅನ್ಯಾಯವಾಗದಂತೆ ಕೇಂದ್ರದಲ್ಲಿರುವ ಸರ್ವ ಪಕ್ಷದ ನಾಯಕರು ಪ್ರಯತ್ನಿಸಲಿದ್ದೇವೆ. ಪ್ರಾಧಿಕಾರ ಮತ್ತು ಸಮಿತಿ ಬಗ್ಗೆ ಚರ್ಚಿಸುವವರು ಮೊದಲು ಅಂತಾರಾಜ್ಯ ನೀರು ವಿವಾದ ಕಾಯ್ದೆ ಓದಿಕೊಳ್ಳಬೇಕು. ಅದರಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ರಚಿಸುವುದು ಕೇಂದ್ರಕ್ಕೆ ಬಿಟ್ಟ ವಿಚಾರವೆಂದು ಸುಪ್ರೀಂಕೋರ್ಟ್‌ ತಿಳಿಸಿದ್ದು, ಅದರಂತೆ ಕೇಂದ್ರ ಕ್ರಮ ಕೈಗೊಂಡಿದೆ.
- ಅನಂತಕುಮಾರ್‌, ಕೇಂದ್ರ ಸಚಿವ 

ಸರ್ಕಾರ ಹೆಸರು ಕಳುಹಿಸಿಕೊಡದೇ ಇದ್ದರೂ ಕೇಂದ್ರ ಸರ್ಕಾರ ಪ್ರಾಧಿಕಾರ ಮತ್ತು ಸಮಿತಿ ರಚಿಸಿ ಹೊರಡಿಸಿರುವ ಆದೇಶದಲ್ಲಿ ಅಧಿಕಾರಿಯ ಹುದ್ದೆಗಳನ್ನು ನಮೂದಿಸಲಾಗಿದ್ದು, ಇದರಿಂದ ರಾಜ್ಯವನ್ನು ಹೊರಗಿಡಲಾಗಿದೆ ಎಂಬ ಮುಖ್ಯಮಂತ್ರಿಗಳ ಆರೋಪ ರಾಜಕೀಯ ಪ್ರೇರಿತ. ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ.
- ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಉ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا