Urdu   /   English   /   Nawayathi

ಬಿರು ಮಳೆಗೆ ಉತ್ತರ ತತ್ತರ : ರಾಜಸ್ತಾನದಲ್ಲಿ 27, ಉ.ಪ್ರ.ದಲ್ಲಿ 45 ಸೇರಿ 77 ಸಾವು

share with us

ನವದೆಹಲಿ: 03 ಮೇ (ಫಿಕ್ರೋಖಬರ್ ಸುದ್ದಿ) ರಾಷ್ಟ್ರದ ರಾಜಧಾನಿ ನವದಹಲಿ ಸೇರಿದಂತೆ ರಾಜಸ್ತಾನ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಬೀಸಿದ ಭಾರಿ ಬಿರುಗಾಳಿಗೆ ಜನ ತತ್ತರಿಸಿ ಹೋಗಿದ್ದು, 77ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.

  • ಉತ್ತರ ಭಾರತದಲ್ಲಿ ಮಳೆ ಆವಾಂತರ.
  • ರಾಜಸ್ತಾನ ಹಾಗೂ ಉತ್ತರ ಪ್ರದೇಶದಲ್ಲಿ 77 ಸಾವು.
  • ಮೃತ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ.
  • ಗಾಯಗೊಂಡವರಿಗೆ 60 ಸಾವಿರ ರೂ. ಪ್ರಕಟ.
  • ಘಟನೆಯ ಬಗ್ಗೆ ಪ್ರಧಾನಿ ನರೇಂದ್ರಮೋದಿ ತೀವ್ರ ಕಂಬನಿ.
  • ವಸುಂಧರ ರಾಜೆ ಮತ್ತು ಯೋಗಿ ಆದಿತ್ಯನಾಥ್ ಅವರಿಂದ ತುರ್ತು ಪರಿಹಾರಕ್ಕೆ ಸೂಚನೆ.
  • ಸಾವಿರಾರು ಮಂದಿ ಮನೆ-ಮಠ ಕಳೆದುಕೊಂಡು ಬೀದಿ ಪಾಲು.
  • ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿರುವ ಉತ್ತರ ಭಾರತ.

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ರಾಜಸ್ತಾನದಲ್ಲಿ 27, ಉತ್ತರ ಪ್ರದೇಶದಲ್ಲಿ ಆಗ್ರ ಜಿಲ್ಲೆಯೊಂದರಲ್ಲೇ 36 ಸೇರಿದಂತೆ ಒಟ್ಟು 45ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಕಳೆದ 2 ದಿನಗಳಿಂದ ಬಿರುಗಾಳಿ ಮಳೆಗೆ ಜನ ಸಾವನ್ನಪ್ಪಿದ್ದಾರೆ. ಬಿರುಗಾಳಿಗೆ ಧೂಳೆದ್ದು ಜನರು ತತ್ತರಿಸಿ ಹೋಗಿದ್ದಾರೆ.

ಬಹುತೇಕ ಮನೆಗಳಿಗೆ ಹಾನಿಯಾಗಿದ್ದು, ವಿದ್ಯುಕ್ ಕಂಬಗಳು, ಮರಗಳು ಧರೆಗುರುಳಿದ್ದು, ಈ ರಾಜ್ಯಗಳಲ್ಲಿ ಅಕ್ಷರಶಃ ಕತ್ತಲಾವರಿಸಿದೆ.

ಅಪಾರ ಪ್ರಮಾಣದಲ್ಲಿ ಜನರು ಸಾವನ್ನಪ್ಪಿರುವ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ರಾಜಸ್ತಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ತುರ್ತು ಪರಿಹಾರ ಕಾಮಗಾರಿ ಕೈಗೊಳ್ಳುವಂತೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ನಡುವೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಆದಿತ್ಯನಾಥ್ ಮತ್ತು ರಾಜಸ್ತಾನದ ಮುಖ್ಯಮಂತ್ರಿ ವಸುಂಧರರಾಜೆ ಅವರು ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದು, ಮೃತರಿಗೆ ತೀವ್ರಸಂತಾಪ ವ್ಯಕ್ತಪಡಿಸಿ ಮೃತ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ರಾಜಸ್ತಾನದಲ್ಲಿ ಬಿರುಗಾಳಿಗೆ 27ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸತ್ತವರ ಪೈಕಿ ಭಾರತ್‌ಪುರ್‌ನಲ್ಲಿ 12, ದೊಲ್ಲಾಪುರ್‌ನಲ್ಲಿ 10, ಅಲ್ವಾರ್‌ನಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ಈ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಸಾವು-ನೋವು, ಹಾನಿ ಸಂಭವಿಸಿದೆ ಎಂದು ಪ್ರಾಕೃತಿಕ ವಿಕೋಪ ಮತ್ತು ಪರಿಹಾರ ಕೇಂದ್ರದ ಕಾರ್ಯದರ್ಶಿ ಹೇಮಂತ್ ಕುಮಾರ್ ಗೇರ ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ 20 ಮಂದಿ ಅಲ್ವಾರ್, ಭಾರತ್‌ಪುರ್‌ನಲ್ಲಿ 32 ಮಂದಿ, ದೊಲ್ಲಾಪುರ್‌ನಲ್ಲಿ 50 ಮಂದಿ ಗಾಯಗೊಂಡಿದ್ದು ಅವರನ್ನು ಜೈಪುರ ಸೇರಿದಂತೆ ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮೃತ ಕುಟುಂಬಳಿಗೆ 4 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ 60 ಸಾವಿರ ರೂ. ಪರಿಹಾರ ಪ್ರಕಟಿಸಲಾಗಿದೆ.
ರಾಜಸ್ತಾನದಲ್ಲಿ ಬಿರುಗಾಳಿ ಮತ್ತು ಮಳೆಗೆ 27ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ್ ಗೆಹಲೋಟ್ ಇಂದು ತಮ್ಮ ಹುಟ್ಟುಹಬ್ಬವನ್ನು ರದ್ದು ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಇಡೀ ರಾಜ್ಯ ಕತ್ತಲಲ್ಲಿ ಮುಳುಗಿರುವಾಗ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸೂಕ್ತವಲ್ಲ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ರದ್ದು ಮಾಡಿ ಅದರ ಬದಲು ಮೃತ ಕುಟುಂಬಗಳಿಗೆ ಪರಿಹಾರ ಕೊಡಿಸಲು ಶ್ರಮಿಸುವುದು ಹಾಗೂ ವಿವಿಧ ಪರಿಹಾರ ಕಾರ್ಯಗಳಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.

ಉತ್ತರ ಭಾರತದ ಹಲವೆಡೆ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆ ತಂಪೆರೆದಿರುವುದು ಖುಷಿ ಕೊಟ್ಟರೆ, ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜಸ್ತಾನ, ಉತ್ತರ ಪ್ರದೇಶವಲ್ಲದೆ ಬಿಹಾರ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಮಳೆಗೆ ಜನ ತತ್ತರಿಸಿ ಹೋಗಿದ್ದು, ಸಾವಿರಾರು ಮಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಂ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا