Urdu   /   English   /   Nawayathi

23 ಯುವತಿಯರ ವಂಚಿಸಿದ್ದವನ ಬಂಧನ

share with us

ಬೆಂಗಳೂರು: 22 ಏಪ್ರಿಲ್ (ಫಿಕ್ರೋಖಬರ್ ಸುದ್ದಿ) ಮದುವೆ ಆಗುವುದಾಗಿ ಹೇಳಿ 23 ಯುವತಿಯರನ್ನು ವಂಚಿಸಿದ್ದ ಆರೋಪದಡಿ ನವೀನ್ ಸಿಂಗ್ ಅಲಿಯಾಸ್‌ ಯುವರಾಜ್‌ ಸಿಂಗ್ (35) ಎಂಬಾತನನ್ನು ಜೆ.ಸಿ.ನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನ ವಿದ್ಯಾನಗರದ ನಿವಾಸಿಯಾದ ಈತ, ಮದುವೆ ನೆಪದಲ್ಲಿ ಯುವತಿಯರಿಂದ ಹಣ ಪಡೆದುಕೊಂಡು ನಾಪತ್ತೆಯಾಗುತ್ತಿದ್ದ. ಈ ಸಂಬಂಧ ಮುನಿರೆಡ್ಡಿಪಾಳ್ಯದ ನಿವಾಸಿ ಭರತ್‌ ಸಿಂಗ್‌ ದೂರು ನೀಡಿದ್ದರು. ಅದರನ್ವಯ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಮ್ಯಾಟ್ರಿಮೊನಿಯಲ್ ಸೇರಿದಂತೆ ವಿವಿಧ ವೈವಾಹಿಕ ಜಾಲತಾಣಗಳಲ್ಲಿ ಆರೋಪಿಯು ನಕಲಿ ಖಾತೆಗಳನ್ನು ತೆರೆಯುತ್ತಿದ್ದ. ಬೇರೊಬ್ಬ ಚಂದದ ಹುಡುಗನ ಭಾವಚಿತ್ರವನ್ನು ಅದಕ್ಕೆ ಜೋಡಿಸುತ್ತಿದ್ದ. ತಾನು ಸ್ಯಾಮ್‌ಸಂಗ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಾಸಿಕ ₹13 ಲಕ್ಷದಿಂದ ₹14 ಲಕ್ಷ ವೇತನವಿದೆ ಎಂದು ಖಾತೆಯಲ್ಲಿ ಉಲ್ಲೇಖಿಸಿದ್ದ.

ಆ ಖಾತೆ ಮೂಲಕ ಯುವತಿಯರಿಗೆ ಸಂದೇಶ ಕಳುಹಿಸುತ್ತಿದ್ದ. ಅದಕ್ಕೆ ಯುವತಿಯರು ಸ್ಪಂದಿಸುತ್ತಿದ್ದಂತೆ, ಮದುವೆಯಾಗುವುದಾಗಿ ಹೇಳಿ ಮೊಬೈಲ್‌ ನಂಬರ್‌ ಪಡೆದುಕೊಳ್ಳುತ್ತಿದ್ದ. ನಂತರ, ಯುವತಿಯರೊಂದಿಗೆ ನಿತ್ಯವೂ ಮಾತನಾಡುತ್ತಿದ್ದ. ಕೆಲ ದಿನಗಳ ಬಳಿಕ, ‘ನನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ತುರ್ತಾಗಿ ಹಣ ಬೇಕಿದೆ. ನಾನು ನಿನ್ನನ್ನು ಖಂಡಿತವಾಗಿ ಮದುವೆಯಾಗುತ್ತೇನೆ. ಈಗ ಹಣ ಕೊಡು’ ಎಂದು ಆರೋಪಿ ಯುವತಿಯರನ್ನು ಕೋರುತ್ತಿದ್ದ.

ಅದನ್ನು ನಂಬುತ್ತಿದ್ದ ಯುವತಿಯರು ಹಣ ಕೊಡುತ್ತಿದ್ದರು. ಇದೇ ರೀತಿ ಆತ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳ 23 ಯುವತಿಯರಿಂದ ಹಣ ಪಡೆದುಕೊಂಡಿದ್ದಾನೆ. ಹಣ ಕೈ ಸೇರಿದ ಮರುದಿನವೇ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾದಿಂದ ಸಿಕ್ಕಿಬಿದ್ದ: ದೂರುದಾರ ಭರತ್‌ಸಿಂಗ್‌ ಅವರ ತಂಗಿಗೆ ಗಂಡು ಹುಡುಕಲಾಗುತ್ತಿತ್ತು. ಅವರ ತಾಯಿಯ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ್ದ ಆರೋಪಿ, ನಿಖಿಲ್‌ ಸಿಂಗ್‌ ಎಂದು ಪರಿಚಯಿಸಿಕೊಂಡಿದ್ದ. ‘ನಿಮ್ಮ ಮಗಳನ್ನು ಮದುವೆಯಾಗುತ್ತೇನೆ’ ಎಂದಿದ್ದನೆಂದು ಪೊಲೀಸರು ತಿಳಿಸಿದರು.

‘ಮನೆಗೆ ಬಂದು ಮಾತನಾಡು’ ಎಂದು ತಾಯಿ ಹೇಳಿದ್ದರು. ಅದಾದ ನಂತರ ಆರೋಪಿ ನಾಪತ್ತೆಯಾಗಿದ್ದ. ಕೆಲ ದಿನ ಬಿಟ್ಟು ದೂರುದಾರರ ತಂಗಿಗೆ ನೇರವಾಗಿ ಕರೆ ಮಾಡಿದ್ದ ಆರೋ‍‍ಪಿ, ‘ನೀನು ನನ್ನನ್ನು ಮದುವೆಯಾಗಬೇಕು. ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲ’ ಎಂದು ಬೆದರಿಕೆವೊಡ್ಡಿದ್ದ. ಜತೆಗೆ, ತಂಗಿಯು ಕೆಲಸ ಮಾಡುತ್ತಿದ್ದ ಕಚೇರಿಗೂ ಹೋಗಿ ಕಿರುಕುಳ ನೀಡಿದ್ದ ಎಂದರು.

ಆರೋಪಿಯಿಂದ ವಂಚನೆಗೀಡಾಗಿದ್ದ 22 ಯುವತಿಯರು ಆರೋಪಿಯ ನೈಜ ಮುಖ ನೋಡಿರಲಿಲ್ಲ. ದೂರುದಾರರ ತಂಗಿಯ ಕಚೇರಿಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಮಾತ್ರ ಆತನ ಮುಖಚಹರೆ ಸೆರೆಯಾಗಿತ್ತು. ಅದನ್ನು ಆಧರಿಸಿಯೇ ದೂರು ದಾಖಲಾದ 24 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಿದೆವು ಎಂದು ಪೊಲೀಸರು ಹೇಳಿದರು.

‘ಅಂಧ ತಂದೆ ಸಾಕಲು ಕೃತ್ಯ’

ಆರೋಪಿಯ ತಂದೆ ಅಂಧರಾಗಿದ್ದು, ತಾಯಿಗೆ ವಯಸ್ಸಾಗಿದೆ. ಅವರಿಬ್ಬರನ್ನು ಸಾಕಲು ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.

‘ಪಿಯುಸಿವರೆಗೆ ಓದಿದೆ. ಹಣದ ಕೊರತೆಯಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಲಿಲ್ಲ. ವೈವಾಹಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವತಿಯರು ವೈಯಕ್ತಿಕ ವಿವರ ಅಪ್‌ಲೋಡ್‌ ಮಾಡಿರುತ್ತಾರೆ ಎಂಬುದನ್ನು ತಿಳಿದುಕೊಂಡೆ. ನಂತರವೇ ಬೇರೆಯವರ ಫೋಟೊ ಬಳಸಿಕೊಂಡು ನಕಲಿ ಖಾತೆ ತೆರೆದು ಯುವತಿಯರನ್ನು ಪರಿಚಯ ಮಾಡಿಕೊಂಡೆ’ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರ, ವಾ ವರದಿ

Prayer Timings

Fajr فجر
Dhuhr الظهر
Asr أسر
Maghrib مغرب
Isha عشا