Dars-e-Hadees

 Live Makkah

Live Madinah

Dars-e-Hadees

africa
starway
Download Free Templates http://bigtheme.net/ Websites Templates

ಕಮ್ಯೂನಿಸ್ಟ್ ನಾಯಕ ಅಬ್ರಹಾಂ ಕರ್ಕಡ ಇನ್ನಿಲ್ಲ

ಕಮ್ಯೂನಿಸ್ಟ್ ನಾಯಕ ಅಬ್ರಹಾಂ ಕರ್ಕಡ ಇನ್ನಿಲ್ಲ


ಕುಂದಾಪುರ: 01 Feb(Fikrokhabar./sources)ಕರಾವಳಿ ಭಾಗದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಹುಟ್ಟು ಹಾಕುವಲ್ಲಿ ಶ್ರಮಿಸಿದ ಎಡಪಕ್ಷಗಳ ಹಿರಿಯ ಮುಖಂಡ ಕಾಮ್ರೇಡ್ ಅಬ್ರಹಾಂ ಕರ್ಕಡರವರು ಅಸೌಖ್ಯದಿಂದ ಬಳಲುತ್ತಿದ್ದು ನಿನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ ಎಡ ಚಿಂತನೆಗಳನ್ನು, ಕಮ್ಯುನಿಸ್ಟ್ ಪಕ್ಷವನ್ನು ಪಟ್ಟಭದ್ರ ಶಕ್ತಿಗಳನ್ನು ಎದುರುಹಾಕಿಕೊಂಡು ಕಟ್ಟಿದ ಅಬ್ರಹಾಂ ಕರ್ಕಡ ಇದೇ ಕಾರಣಕ್ಕಾಗಿ ಇಂದಿಗೂ ಜನಸಾಮಾನ್ಯರ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.


ತನ್ನ ಹದಿನೆಂಟನೆ ವಯಸ್ಸಿನಲ್ಲಿ ಕುಂದಾಪುರ ಪ್ರಭಾಕರ ಟೈಲ್ಸ್ ನಲ್ಲಿ ಕೆಲಸಕ್ಕೆಂದು ಸೇರಿದ ಇವರು ಕಾರ್ಮಿಕರಿಗಾಗುತ್ತಿರುವ ಅನ್ಯಾಯಗಳ ವಿರುದ್ದ ಸಿಡಿದೇಳುತ್ತಿದ್ದರು. ಕಾರ್ಮಿಕರಿಗೆ ಸಿಗಬೇಕಾಗಿದ್ದ ಸೌಲಭ್ಯಗಳು ಸಿಗದೇ ಇದ್ದಾಗ ಕಾರ್ಮಿಕರೆಲ್ಲರನ್ನು ಕೂಡಿಕೊಂಡು ಪ್ರತಿಭಟನೆಗಿಳಿದಿದ್ದರು. ಇದರ ಪರಿಣಾಮವಾಗಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿದ್ದ ಬೀಡಿ ಕಾರ್ಮಿಕರ ಹಾಗೂ ಹೆಂಚು ಕಾರ್ಮಿಕರ ಹೋರಾಟ ಇವರ ಮೇಲೆ ಪ್ರಭಾವ ಬೀರಿತು. ಇದಾದ ಮೇಲೆ ಎಲ್ಲಾ ಕಾರ್ಖಾನೆಯಲ್ಲಿ ಕಾರ್ಮಿಕರನ್ನು ಒಗ್ಗೂಡಿಸಿ ಸಂಘ ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾದರು.

ಇದರ ಮಧ್ಯೆ ಹಲವಾರು ಹೋರಾಟದಲ್ಲಿ ಪೊಲೀಸ್ ಲಾಠಿ ಏಟನ್ನು ತಿಂದು 15 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದರು.

ಭೂಸುಧಾರಣಾ ಹೋರಾಟದಲ್ಲಿಯೂ ಇವರ ಕೊಡುಗೆ ಅನನ್ಯವಾದುದು. ಭೂಮಾಲೀಕರ ದಬ್ಬಾಳಿಕೆ ಎದೆಗುಂದದ ಕರ್ಕಡರವರು ಬಸ್ರೂರಿನಲ್ಲಿ ದೊಡ್ಡ ಮಟ್ಟದ ಹೋರಾಟವನ್ನು ನಡೆಸಿದ್ದರು. 80ರ ದಶಕದಲ್ಲಿ 90 ದಿನದ ಮುಷ್ಕರವು ಕರ್ಕಡರ ಮತ್ತು ಸಿ. ನಾರಾಯಣ ಅವರ ನಾಯಕತ್ವದಲ್ಲಿ ನಡೆದದ್ದು ಇಲ್ಲಿ ಸ್ಮರಿಸಬಹುದಾಗಿದೆ. ಅಬ್ರಹಾಂ ಕರ್ಕಡರು ಈ ಹೋರಾಟದಲ್ಲಿ ಪೊಲೀಸರನ್ನು ಎದುರುಹಾಕಿಕೊಂಡು, ಬಲಾಢ್ಯ ಭೂಮಾಲಕರನ್ನು ಎದುರುಹಾಕಿಕೊಂಡು ಸಂಘಟಿತ ಹೋರಾಟ ರೂಪಿಸಿದ್ದು ಅವರಿಗೆ ಉಡುಪಿ, ಕುಂದಾಪುರ ಭಾಗಗಳಲ್ಲಿ ವಿಶೇಷ ಜನಮನ್ನಣೆ ತಂದುಕೊಟ್ಟಿತು. ಈ ಜನಪರ ಹೋರಾಟದಲ್ಲಿ ಅಬ್ರಹಾಂ ಕರ್ಕಡರನ್ನು ಹಿಮ್ಮೆಟ್ಟಿಸುವ ಸಲುವಾಗಿ ಅವರ ಮೇಲೆ ಪೊಲೀಸರು ದೈಹಿಕ ದೌರ್ಜನ್ಯ ನಡೆಸಿದ್ದು, ಅದರಿಂದ ಕರ್ಕಡರಿಗೆ ಹಲವು ವರ್ಷ ದೈಹಿಕ ತೊಂದರೆಗಳಾಗಿದ್ದವು ಎಂದು ಅವರ ಹೋರಾಟವನ್ನು ಬಲ್ಲವರು ಹೇಳುತ್ತಿದ್ದು, ಅವರು ಎಂಥ ಬೆದರಿಕೆ, ಹಲ್ಲೆಗಳಿಗೂ ಜಗ್ಗದ ಕ್ರಾಂತಿಕಾರು ಕಮ್ಯುನಿಸ್ಟ್ ನಾಯಕ ಎಂದು ನೆನಪಿಸಿಕೊಳ್ಳಲಾಗುತ್ತಿರುವುದು ಗಮನಾರ್ಹ.

ಕುಂದಾಪುರ ತಾಲೂಕಿನಲ್ಲಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘವನ್ನು ಸ್ಥಾಪಿಸಿದ್ದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಒಟ್ಟಿನಲ್ಲಿ ಹಲವು ಮುಖಂಡರ ಸಹಾಯದಿಂದ ಕರಾವಳಿ ಬಾಗದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟುವಲ್ಲಿ ವಿಶೇಷ ಪಾತ್ರವಹಿಸಿದ್ದರು.

ಇವರ ಬೆಂಬಿಡದ ಛಲ, ಹೋರಾಟದಿಂದ ಇಂದು ಬಡವರಿಗೆ ಭೂಮಿ, ಹೆಂಚು ಮತ್ತು ಬೀಡಿ ಕಾರ್ಮಿಕರಿಗೆ ಸಂಬಳ ಜಾಸ್ತಿಯಾಗುವಲ್ಲಿ ಸಹಕಾರಿಯಾಗಿದೆ. ಜಿಲ್ಲಾ, ರಾಜ್ಯಮಟ್ಟದ ನಾಯಕರಾದ ಇವರು ತನ್ನ ಉಸಿರಿನ ಕೊನೆ ತನಕವು ಪಕ್ಷದ ಸದಸ್ಯರಾಗಿದ್ದರು ಎಂದು ಸಿಪಿಐಂನ ಬಾಲಕೃಷ್ಣ ಶೆಟ್ಟಿ 'ಕರಾವಳಿಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಅಬ್ರಹಾಂ ಕರ್ಕಡರವರು ಹೆಂಡತಿ, ಮೂವರು ಹೆಣ್ಣು ಮಕ್ಕಳು, ಅಸಂಖ್ಯಾತ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಿಐಟಿಯು, ಸಿಪಿಐಎಂ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.

Read 47 times

Recent Videos

Category: Religious
Views: 138
Category: Religious
Views: 75
Category: Religious
Views: 38